ಓದಿ ಓಡಿದವರು!

Sunday 5 August 2012

ಪ್ರಶ್ನೆ!

ಒಂದೇ ರಾತ್ರಿಯ ಹಲವು ಕನಸು




           ಡಿಯೂರಪ್ಪನವರು ನಗುತ್ತಿರುವ ಫೋಟೋ ಪಕ್ಕದಲ್ಲಿ ಸದಾನಂದ ಗೌಡರು ಅಳುತ್ತಿರುವ ಫೋಟೋ ಫ್ರೇಮುಗಳು ಸಾರ್ವಜನಿಕವಾಗಿ ಕಾಣುವಹಾಗೆ ಹಾಕಲಾಗಿತ್ತು. ಅರೆರೆ ಇದೇನಪ್ಪಾ ವಿಚಿತ್ರ ಅಂತ ತಲೆಕೆಡಿಸಿಕೊಂಡು ಅಲ್ಲೇ ಯಾರೋ ಸುಕ್ಕು ಸುಕ್ಕಾಗಿದ್ದ ಖಾದಿ ಬಟ್ಟೆ ಧರಿಸಿ ಫೋಟೋಗಳನ್ನು ನೋಡುತ್ತಿದ್ದವನ ಬಳಿ ಹೋಗಿ ಏನ್ ಸಾರ್ ಇದು ನಿಜ ಜೀವನದಲ್ಲಿ ಸತ್ಯವಾಗುವಂಥದ್ದನ್ನ ಹಾಕಿ ಸಾರ್ ಅಂದೆ. ಆತ ನನ್ನೆಡೆಗೆ ತಿರುಗುತ್ತಾನೆ ನೋಡಿದ್ರೆ ಯಡಿಯೂರರು. ಇದೇ ಹೊಸಾ ಫೋಟೋ ಕಣೋ ಹುಡುಗ ಇನ್ನು ಮೇಲೆ ಹೀಗೇನೇ ಅಂತಂದ್ರು. ನಾವು ಹಿಂದೆ ಮಾತನಾಡುವ ಜಾತಿಯಲ್ಲಿ ಹುಟ್ಟಿರುವವರು ಎದುರಿಗೆ ಏನೂ ಪ್ರತಿಕ್ರಿಯೆ ಅಥವಾ ಹಾಸ್ಯ ಮಾಡಲಾಗಲಿಲ್ಲ. ಸುಮ್ಮನೆ ನಿಂತಿದ್ದೆ ಸದನದ ಎಡಗಡೆಯ ಬಾಗಿಲಿನಿಂದ ಯಾರೋ ಇನ್ನೊಂದು ಅದೇ ಗಾತ್ರದ ಫೋಟೋ ಫ್ರೇಮ್ ಹಿಡಿದು ಒಳಗೆ ಓಡಿಬಂದರು. ಹಿಂತಿರುಗಿ ನೋಡಿದೆ ಇಡೀ ಸದನ ಖಾಲಿಯಾಗಿತ್ತು. ಅರೆರೆ ಸದಾನಂದ ಗೌಡರು ಕ್ಲೋಸಪ್ ಸ್ಮೈಲ್ ಕೊಟ್ಟಿರುವ ಫೋಟೋ. ನನಗೇ ಗೊತ್ತಿಲ್ಲದೇ ಇದೇನ್ ಸಾರ್ ಅಂತ ಬಾಯಿಂದ ಮಾತುಗಳು ಹೊರಗೆ ಬಿದ್ದುಬಿಟ್ಟವು. ಫೋಟೋ ಹಿಡಿದಿದ್ದವನು ಆ ಫೋಟೋ ತೆಗೆದು ಇನ್ನು ಮೇಲೆ ಇದೇ ಹಾಕಬೇಕಂತೆ ಅಂದಿದ್ದೇ ಅಳುಮೊಗ ತೆಗೆದು ನಗುಮೊಗದ ಫೋಟೋ ತಗುಲಿಹಾಕಿದ. ಶೆಟ್ಟರ್ ಫೋಟೋ ಬಂದಮೇಲೆ ಸದಾನಂದರ ಪಕ್ಕದ ಜಾಗದಲ್ಲಿ ಹಾಕು ನನ್ನ ಫೋಟೋಗೆ ಕೈ ಹಚ್ಚಿದರೆ ಯಾರ ಫೋಟೋ ಕೂಡ ಉಳಿಸೋದಿಲ್ಲ ಎಚ್ಚರಿಕೆ ಅಂತ ಆತನೆಡೆಗೆ ಮತ್ತು ನನ್ನೆಡೆಗೆ ನೋಡಿ ಖಾಲಿ ಸದನದಲ್ಲೇ ಹೋಗಿ ಕುಳಿತರು ಯಡಿಯೂರರು. ಇಬ್ಬರೂ ಜಾಗ ಖಾಲಿ ಮಾಡಿದ ನಂತರ ಅಲ್ಲೇ ಅದೇ ಫೋಟೋ ಕೆಳಗೆ ನಗಬೇಕೋ, ಅಳಬೇಕೋ, ಕುಪಿತನಾಗಬೇಕೋ, ನಿರ್ಲಕ್ಷಿಸಿ ನನ್ನ ಪಾಡಿಗೆ ಹೊರಟುಹೋಗಬೇಕೋ, ಇನ್ನಾರಬಳಿಯಾದರೂ ಹಂಚಿಕೊಂಡು ಬಾಯಿಚಪಲ ತೀರಿಸಿಕೊಳ್ಳಬೇಕೋ ಏನೂ ತೀರ್ಮಾನಿಸಲಾಗದೇ ಸುಮ್ಮನೆ ನಿಂತೇ ಇದ್ದೆ.

ನೀವೆಲ್ಲಾ ಒಂದೇ ತರಹ ಕಾಣಿಸುತ್ತಿದ್ದೀರಾ ನನಗೆ. ಒಳ್ಳೇ ಹೊಸದಾಗಿ ಚೈನಾದವರನ್ನೋ, ವೆಸ್ಟ್ ಇಂಡೀಸ್ ಅವರನ್ನೋ ನೋಡಿದಾಗ ಎಲ್ಲಾ ಒಂದೇ ತರಹ ಇದ್ದಾರೆ ಅನ್ನಿಸೋದಿಲ್ವಾ ಹಾಗೇ ಅನ್ನಿಸುತ್ತಿದೆ ಅಂದದ್ದಕ್ಕೆ ನಗುತ್ತಲೇ ಉತ್ತರಿಸಿದರು. ನಮಗೂ ಅಷ್ಟೇ ಎಲ್ಲರೂ ಒಂದೇ ರೀತಿ ಕಾಣ್ತೀರಿ ಯಾವ ಬೇಧವೂ ಕಾಣೋಲ್ಲ ಯಾರಲ್ಲೂ, ಅಂತಂದರು.   ನಾನೂ ಒಮ್ಮೆ ಮುಗುಳ್ನಕ್ಕು ಇಡೀ ಕೊಠಡಿಯಲ್ಲಿ ನಿಂತು ಮಾತುಕತೆಗಳನ್ನು ಮುಂದುವರೆಸಿದ್ದ ಎಲ್ಲಾ ಒಂದೇ ರೀತಿಯ ಜನರನ್ನು ನೋಡಿದೆ. ಮತ್ತೆ ತಲೆಯಲ್ಲಿ ಒಂದು ಪ್ರಶ್ನೆ ಹುಟ್ಟಿತು. ನಾನು ಮಾತನಾಡಿಸುತ್ತಿದ್ದ ನನ್ನೆದುರಿನ ವ್ಯಕ್ತಿಯನ್ನೇ ಪ್ರಶ್ನಿಸಿದೆ. ಸಾರ್ ದಯವಿಟ್ಟು ತಪ್ಪು ತಿಳೀಬೇಡಿ, ನಿಮ್ಮ ಹೆಸರೇನು? ಎಂದೆ. ಈಶ್ವರ ಎಂದರು. ಹಾಗಾದರೆ ನಿಮ್ಮ ಪಕ್ಕದಲ್ಲಿರುವವರು ಪಾರ್ವತಿನಾ ಅಂದೆ. ಅಲ್ಲಾ ಗಂಗೆ ಅಂದ್ರು ಒಂದು ನಮಸ್ಕಾರ ಮಾಡಿದೆ. ಪ್ರತಿನಮಸ್ಕಾರ ಸ್ವೀಕರಿಸಿ ಮತ್ತೆ ಈಶ್ವರ ಅವರ ಕಡೆ ತಿರುಗಿ, ಮತ್ತೆ ನಿಮ್ಮ ತ್ರಿಶೂಲ, ಹಾವು, ವಿಭೂತಿ, ತೊಗಲು ಬಟ್ಟೆ ಇವೆಲ್ಲಾ.. ಎಂದು ಅಳುಕುತ್ತಲೇ ಕೇಳಿದ್ದಕ್ಕೆ ಗಂಗೆಯ ಮುಖ ಒಮ್ಮೆ ನೋಡಿ ಹಸನ್ಮುಖಿಯಾಗಿಯೇ ನೀನು ಪದವಿ ಮುಗಿದ ಮೇಲೆ ಗ್ರಾಡ್ಯುಯೇಷನ್ ದಿನದಂದು ಗೌನು ಟೊಪ್ಪಿ ಎಲ್ಲಾ ಧರಿಸಿರುತ್ತೀರಲ್ಲಾ ಅದನ್ನೇ ಯಾವಾಗಲೂ ಯಾಕೆ ಧರಿಸಿರುವುದಿಲ್ಲ ಎಂದರು. ಹಿ ಹಿ ಹಿ ಎಂದು ಬೆಪ್ಪನಂತೆ ನಕ್ಕೆ ಮತ್ತು ಆದರೆ ನಿಮ್ಮನ್ನ ಯಾವ ಚಿತ್ರಪಟದಲ್ಲಿ ನೋಡಿದ್ರೂ ಎಲ್ಲಾ ಕಲಾವಿದರೂ ನಿಮ್ಮನ್ನ ಹಾಗೇ ರಚಿಸಿರುತ್ತಾರೆ ಯಾವ ಸಿನಿಮಾದಲ್ಲಿ, ಟಿವಿ ಸೀರಿಯಲ್ಲು ನಾಟಕ ಯಾವುದರಲ್ಲಿ ಯಾವ ಸಮಯದಲ್ಲಿ ನೋಡಿದರೂ ಸಹ ಹಾಗೇ ಷೋಕೇಸ್ ಮಾಡಲಾಗುತ್ತದೆ ಅದಕ್ಕೇ ಕೇಳಿದೆ ಎಂದೆ. ಕ್ಲೀಷೆ…ಕ್ಲೀಷೆ ಎಂದು ಸುಮ್ಮನಾದರು. ನನ್ನೆದುರಿಗೆ ನಿಂತಿರುವ ನೀವುಗಳು ಒಂದೇ ರೀತಿ ಇದ್ದೀರಿ ಯಾರು ರಾಮ, ಯಾರು ಕೃಷ್ಣ, ಯಾರು ಗಣೇಶ ಎಂದು ಒಂದೂ ಗೊತ್ತಾಗುತ್ತಿಲ್ಲ, ನಿಮ್ಮನ್ನ ದೇವರೆಂದರೆ ನಮ್ಮಲ್ಲಿ ಯಾರೂ ನಂಬುವುದಿಲ್ಲ ಎಂದು ಎಲ್ಲರಿಗೂ ಕೇಳುವ ಹಾಗೆಯೇ ಹೇಳಿದೆ. ನಾವುಗಳು ದೇವರೆಂದು ನಿಮಗೆ ನಂಬಿಕೆ ಬರುವುದೋ ಇಲ್ಲವೋ ಗೊತ್ತಿಲ್ಲ, ನೀವಂತೂ ನಮ್ಮ ಪಾಲಿನ ದೇವರುಗಳು ಎಂದು ಸರ್ವಾನುಮತದಿಂದ ಒಪ್ಪಿಕೊಂಡರು. ಹೌದು ಹೌದು ಎಲ್ಲಾ ದೇವರುಗಳೂ ಒಪ್ಪಿಗೆ ಸೂಚಿಸುತ್ತಿದ್ದರು.



ಕಾಸರವಳ್ಳಿ ಸಾರ್ ಮುಂದೆ ಮುಂದೆ ನಡೆದುಕೊಂಡು ಹೋಗ್ತಾ ಇದ್ರು. ನಾನು ಒಂದು ಕ್ಯಾಮೆರಾ ನನ್ನ ಪಕ್ಕದಲ್ಲಿ ಪರಮ ಒಂದು ಚಿತ್ರಕಥೆಯ ಹಾಳೆಗಳು ಕೈಲಿ ಹಿಡಿದು ಅವರ ಹಿಂದೆ ಹಿಂದೆ ಹುಲ್ಲಿನ ರಾಶಿಯಲ್ಲಿ ದಾರಿ ಮಾಡಿಕೊಂಡು ನಡೆದುಕೊಂಡು ಹೋಗುತ್ತಿದ್ದೆವು. ಮಗಾ ಇದು ಕೂಡ ತೀರಾ ಕಲಾತ್ಮಕ ಚಿತ್ರದ ತರಹಾನೇ ಇಲ್ವೇನೋ ಅಂತ ನಾನು ಕೇಳೀದ್ರೆ ಇವರು ಕಮರ್ಷಿಯಲ್ ಮಾಡಲ್ಲ ಮಗಾ, ಗೊತ್ತಿರೋದೇ ಅಲ್ವಾ ಅಂತ ಪರಮ. ಕಾಸರವಳ್ಳಿಯವರು ನೋಡಿದ್ರೆ ಅವರ ಪಾಡಿಗೆ ಕೈ ಹಿಂದೆ ಕಟ್ಟಿಕೊಂಡು ದಾರಿ ಮಾಡಿಕೊಂಡು ನಡೆಯುತ್ತಲೇ ಇದ್ರು. ಹಿಂದಿನಿಂದ ಅವರ ಕನ್ನಡಕದ ದಾರ ಅವರ ನಡಿಗೆಯೊಂದಿಗೆ ಅತ್ತ ಇತ್ತ ಓಲಾಡುತ್ತಿದ್ದುದು ಕೂಡ ಸ್ಪಷ್ಟವಾಗಿ ಕಾಣುತ್ತಲಿತ್ತು. ಮತ್ತೆ ಪರಮನ ಕಡೆ ತಿರುಗಿ, ಆದರೆ ಸ್ಕ್ರಿಪ್ಟ್ ನಲ್ಲಿ ಎಂಥಾ ಗಟ್ಟಿತನ ಇದ್ಯೋ ಲೋ. ಹ್ಯಾಟ್ಸ್ ಆಫ್ ಕಣೋ ಅವರಿಗೆ ಈ ಸ್ಕ್ರಿಪ್ಟ್ ನಲ್ಲಿರುವ ಮಜಾ ಕಮರ್ಷಿಯಲ್ ಸಿನಿಮಾಗಳಲ್ಲಿ ನಿಜವಾಗಲೂ ಸಿಗಲ್ಲ ಕಣೋ ಅಂದೆ. ನಾನು ಆ ಸಣ್ಣ ಕಥೆ ಕೂಡ ಓದಿದ್ದೀನಿ ಕಣೋ ಓದಿದಾಗ ಇದರಲ್ಲಿ ಸಿನಿಮಾ ಮಾಡೋಕೇನಿಲ್ಲಾ ಅಂತ ಅಂದುಕೊಂಡೆ, ಹಾ, ಅದು ನಮ್ಮ ತಲೆಗೆ ಹಾಗೇ ಅನಿಸಬೇಕಾದ್ದೇ ಬಿಡು ಆದರೆ ಈ ಸ್ಕ್ರಿಪ್ಟ್ ನೋಡಿದ ಮೇಲೆ ಅನಿಸ್ತಾ ಇದೆ ಕಾಸರವಳ್ಳಿ ಕಾಸರವಳ್ಳಿ ಯಾಕೆ ಆಗ್ತಾರೆ ಅಂತ ಅಂದ. ಅದೇನೋ ನಿಜ ಲೇ ಭಟ್ಟರ ಕಪರ್ಷಿಯಲ್ ಅಂಶದ ಹತ್ತು % ಆದರೂ ಇವರು ಅಳವಡಿಸಿಕೊಂಡು ಸ್ಕ್ರಿಪ್ಟ್ ಮಾಡ್ಬಿಟ್ರೆ ಕರ್ನಾಟಕದಲ್ಲಿ ಇವರ ಸಿನಿಮಾದ ರುಚಿ ನೋಡಿದ ಜನ ಬೇರೆ ಸಿನಿಮಾಗಳನ್ನ ಮೂಸಿ ಕೂಡ ನೋಡೋದಿಲ್ಲ ಅಷ್ಟೇ, ಆದರೆ ಈ ಮಟ್ಟಿಗಿನ ನೈಜತೆ, ಆ ಸೊಗಡನ್ನ, ಸದಭಿರುಚಿಯನ್ನ ಉಳಿಸಿಕೊಂಡು ಮತ್ತೆ ಕಮರ್ಷಿಯಲ್ ಮಾಡೋಕೋಸ್ಕರ ಬೇರೆ ಅಂಶಗಳನ್ನ ತುರುಕಿದರೆ ಈ ಸಿನಿಮಾನೇ ಕೆಟ್ಟು ಹೋಗುತ್ತೆ ಅಷ್ಟೇ. ಹಾಗೆ ನೋಡಿದರೆ ಇವರು ಇವರ ದಾರೀಲೇ ಸರಿ ಇದಾರೆ ಅನಿಸುತ್ತೆ ಕಣೋ ಅದು ಇದು ಅಂತ ನಮ್ಮ ನಮ್ಮಲ್ಲೇ ಮಾತು ನಡೆದೇ ಇತ್ತು. ಕಾಸರವಳ್ಳಿಯವರು ಚೂರೇ ಚೂರು ಹಿಂದೆ ನಮ್ಮ ಕಡೆ ತಿರುಗಿ ನಕ್ಕ ಹಾಗೆ ಕಂಡ್ರು. ನಾವು ಮಾತು ನಿಲ್ಲಿಸಿ ಹಿಂದೆ ಮುಂದುವರೆದೆವು. ಅವರು ಹುಲ್ಲಿನ ರಾಶಿಯಲ್ಲಿ ದಾರಿ ಮಾಡಿಕೊಂಡು ನಡೆಯುತ್ತಲೇ ಇದ್ರು.

ಕೈಯಲ್ಲೊಂದು ಕಂಡೋಮ್ ಪ್ಯಾಕೆಟ್ ಇತ್ತು. ಎದುರುಗಡೆ ದೂರದಲ್ಲಿ ಖಾಲಿ ಬಿಳಿ ಬಣ್ಣ ಹೊದ್ದಿರುವ ಗೋಡೆಯಲ್ಲಿ ಒಂದು ಬಿಳಿ ಬಣ್ಣದ್ದೇ ಬಾಗಿಲು ಕೂಡ ಮುಚ್ಚಿಕೊಂಡಿತ್ತು. ನಾನು ಕುಳಿತಿರುವ ಮಂಚದ ಮೇಲಿನ ಬಿಳಿ ಬಣ್ಣದ ಬಟ್ಟೆ ಕೂಡ ತೆಪ್ಪಗೆ ಸುಕ್ಕಾಗದೆ ಹಾಸಿಗೆಯ ಮೇಲೆ ಹಾಸಿಕೊಂಡಿತ್ತು. ನನ್ನ ಮೈಯಲ್ಲಂತೂ ಒಂದು ಇಂಚು ಕೂಡ ಬಟ್ಟೆ ಇರಲಿಲ್ಲ. ದೇಹದ ಸಮಸ್ತ ಸಾಮಾನುಗಳೂ ಪರೀಕ್ಷೆಗೆ ಕಾದಿರುವಂತೆ ಒಂದು ರೀತಿಯ ಟೆನ್ಶನ್, ಚಡಪಡಿಕೆ, ಅಳುಕು, ಕೊಂಚ ಭಯ, ಬಹಳಷ್ಟು ಆಸೆ, ಕಾತುರ, ಉದ್ವೇಗ, ನಿರೀಕ್ಷೆ, ಕುತೂಹಲ ಎಲ್ಲದರ ಮಿಶ್ರಣವಾಗಿ ತಲೆ ಜೊತೆಗೆ ಮಂಚದ ಪಕ್ಕದ ನೂರಿಪ್ಪತ್ತು ಸೆಕೆಂಡುಗಳುಳ್ಳ ಕೈಗಡಿಯಾರದ ಮುಳ್ಳುಗಳು ನಿಧಾನ ಗತಿಯಲ್ಲಿ ಚಲಿಸುತ್ತಿದ್ದವು ಇದ್ದಕ್ಕಿದ್ದಂತೆ ನಿಂತೇ ಹೋದವು. ಕಣ್ಣಿನ ಗೋಲಿಗಳು ಮಾತ್ರ ಒಮ್ಮೆ ಮುಚ್ಚಿದ ಬಾಗಿಲಿನೆಡೆಗೆ ಮತ್ತೊಮ್ಮೆ ಸ್ಥಗಿತವಾಗಿರುವ ಕಾಲದ ಸೂಚಕ ಕೈಗಡಿಯಾರದೆಡೆಗೆ ನೋಡುತ್ತಲಿಹುದು ಉಸಿರು ಹೆಚ್ಚುತ್ತಲಿಹುದು. ಗೋಲಿಗಳು ಅತ್ತ ಇತ್ತ ಅತ್ತ ಇತ್ತ ಅತ್ತ ಇತ್ತ ಸುತ್ತುತ್ತಿದ್ದಂತೆ ಕೈಯಲ್ಲಿದ್ದ ಪ್ಯಾಕೆಟ್ಟು ಸರಕ್ಕನೆ ಹರಿದು ಒಳಗಿದ್ದ ಅಂಟಂಟು ಕಂಡೋಮು ಕೈಗೆ ಬಂತು. ಮುಟ್ಟಿದ್ದೇ ಅಸಹ್ಯ. ಕೈಲಿ ಹಿಡಿಯಲಾಗದೆ ಬಿಳಿ ಹಾಸಿಗೆಯ ಮೇಲೆ ಹಾಕಿಬಿಟ್ಟೆ. ಅಯ್ಯಯ್ಯಾ ಇದನ್ನ ಮುಟ್ಟೋಕೇ ಒಂಥರಾ ಇದೆ ಇನ್ನ ಹಾಕಿಕೊಳ್ಳೋದು ಹೆಂಗೆ ಅಂತ. ಹ್ಯಾಗೆ ಇದನ್ನ ಬಳಸ್ತಾರೋ ಜನ. ಮುಖ ಕಿವುಚಿಕೊಂಡಿದ್ದು ಹಂಗೇ ಇತ್ತು. ಮತ್ತೊಮ್ಮೆ ಮುಚ್ಚಿಕೊಂಡು ಮಲಗಿಯೇ ಬಿಟ್ಟಿದ್ದ ಬಾಗಿಲೆಡೆಗೆ ನೋಡಿ ಸಾಹಸಪಟ್ಟು ಕೈಲಿ ಹಿಡಿದೆ. ಈ ಬಾರಿ ಅಷ್ಟೇನೂ ಅಸಹ್ಯವೆನಿಸಲಿಲ್ಲ. ಆದರೆ ನನ್ನ ಕಣ್ಣುಗಳೇಕೆ ಪದೇ ಪದೇ ಬಾಗಿಲೆಡೆಗೆ ನೋಡುತ್ತಲಿದೆ ಎಂಬ ಪ್ರಶ್ನೆ ಹುಟ್ಟಿಕೊಂಡಿತು. ಯಾರಾದರೂ ಬರುವುದರಲ್ಲಿದ್ದಾರಾ? ನಾನು ಈ ವೇಷದಲ್ಲಿ ಯಾರನ್ನಾದರೂ ಕಾಯುತ್ತಲಿದ್ದೇನಾ? ನನ್ನ ಕೈಯಲ್ಲಿ ಕಂಡೋಮ್ ಯಾತಕ್ಕೆ ಬಂತು? ನಾನು ಹೀಗೆ ಯಾಕೆ ಕುಳಿತಿದ್ದೇನೆ? ನಾನಿರುವುದಾದರೂ ಎಲ್ಲಿ? ಗೋಡೆ, ಬಾಗಿಲು ಸಹಿತ ಇಡೀ ಕೋಣೆ, ಗಡಿಯಾರ, ಹಾಸಿಗೆ, ಮಂಚ, ಬಟ್ಟೆ ಎಲ್ಲವೂ ಬಿಳಿ ಬಿಳಿ ಇರುವುದರ ಅರ್ಥವಾದರೂ ಏನು? ನನ್ನಲ್ಲಿ ಆ ಎಲ್ಲಾ ಮಿಷ್ರ ಭಾವನೆಗಳು ಹುಟ್ಟುತ್ತಿದ್ದದ್ದಾದರೂ ಯಾಕೆ?

ಬಾಗಿಲು ಕಿರ್ರನೆ ತೆರೆದುಕೊಂಡಿತು!

ಈ ಕನಸುಗಳಿಗೆ ಏನು ಅರ್ಥವೋ ನಾಕಾಣೆ. ಒಂದಕ್ಕೊಂದಕ್ಕೆ ಸಂಬಂಧವಂತೂ ಯಾವ ದಿಕ್ಕಿನಿಂದಲೂ ಕಾಣುವುದಿಲ್ಲ. ಆದರೆ ಒಂದರ ನಂತರ ಒಳ್ಳೆ ಸೀರಿಯಲ್ ಎಪಿಸೋಡಿನಂತೆ ಬಂದಿತ್ತು. ಸುಮ್ಮನೆ ಹಾಗೇ ಬಂದವೋ ಅಥವಾ ಒಂದು ದಿನದಲ್ಲಿ ನಾವು ಯಾವುದಾವುದರ ಬಗ್ಗೆ ಚಿಂತಿಸುತ್ತೀವೋ, ಚರ್ಚಿಸಿರುತ್ತೇವೋ, ನಮ್ಮ ಸಮಯವನ್ನ ಯಾವುದಕ್ಕೆ ವ್ಯತ್ಯಯ ಮಾಡಿರುತ್ತೇವೋ ಅದಕ್ಕನುಸಾರವಾಗಿ ಕನಸುಗಳು ಬಿದ್ದಿರಬಹುದು ಎಂದುಕೊಂಡೆ. ಇದನ್ನು ಕಥೆ ಎಂದು ಕರೆಯಲಾಗುವುದಿಲ್ಲ. ಆದರೂ ಈ ಕನಸಿನ ಅಬ್ಸ್ಟ್ರಾಕ್ಟ್ ವಿಚಾರಗಳಲ್ಲಿ ಏನೋ ಹೇಳದಿರುವ ವಿಚಾರಗಳು ಇವೆ ಎಂದು ಕಂಡಿತು. ಈ ಕನಸುಗಳು ಯಥಾವತ್ ಹೀಗೇ ಬಿದ್ದವೆಂದು ಹೇಳಬರುವುದಿಲ್ಲ. ಆದರೂ ನೆನಪಿದ್ದಷ್ಟೂ ಅದಕ್ಕೆ ಅಕ್ಷರ ರೂಪ ಕೊಡಲಾಗಿದೆ. ಕಥೆಗೊಂದು ಶುರು, ಅಂತ್ಯ, ಯಾವುದೂ ಇಲ್ಲ ಒಂದಕ್ಕೊಂದು ಕೊಂಡಿಯೂ ಇಲ್ಲ ಸುಮ್ಮನೆ ವಕ್ಕರ ವಕ್ಕರವಾಗಿ ಹೆಂಗೆಂಗೋ ಇವೆ. ಹಿಂಗೇ ಬರೆದರೆ ಏನಾಗಬಹುದೆಂದು ಕೂಡ ಗೊತ್ತಿಲ್ಲ. ತಿಕ್ಕಲು ಆಲೋಚನೆಗಳೊಂದಿಗೆ ಮಲಗಿದರೆ ತಿಕ್ಕಲು ಕನಸುಗಳು ಅಷ್ಟೇ ತಿಕ್ಕಲು ರೀತಿಯ ನಿರೂಪಣೆ. ಒಟ್ಟಂದದಲ್ಲಿ ಏನಾದರೂ ತಲುಪಿಸುವವೇನೋ ಎಂಬೊಂದು ಆಶಯದ “ಪ್ರಶ್ನೆ”.







+ನೀ.ಮ. ಹೇಮಂತ್

No comments:

Post a Comment