ಓದಿ ಓಡಿದವರು!

Tuesday 26 June 2012

ಸುಸು ಕಥೆ!




         ದರೆ ಆ ಪಾಪು ಯಾಕೆ ಅಳೋಕೆ ಶುರು ಮಾಡ್ತು? ಮಕ್ಕಳ ಮನಸ್ಸನ್ನ ಅರ್ಥ ಮಾಡ್ಕೊಳ್ಳೋದು ಕೂಡ ಅಷ್ಟೋಂದು ಸುಲಭ ಇಲ್ಲ ಸ್ವಾಮಿ. ಏನೇನಾಯ್ತು ಅಷ್ತೊತ್ತಿಂದ ಅಂತ ಹಾಗೇ ಫ್ಲಾಶ್ ಬ್ಯಾಕಿನಲ್ಲಿ ಯೋಚನೆ ಮಾಡಿದೆ. ನಾನು ಮನೆಯಿಂದ ಹೊರಗಡೆ ಬಂದು ನಿಲ್ಲುವ ಸಮಯಕ್ಕೆ ಸರಿಯಾಗಿ ಎದುರು ಮನೆಯ ಆ ಮಗುವೂ ಪುಟ್ಟ ಪುಟ್ಟ ಹೆಜ್ಜೆಗಳನ್ನು ಇಡುತ್ತಾ ನಡೆದು ಬಂದು ನಿಂತಿತು. ನನ್ನ ಮನೆಯೂ ಮೊದಲ ಮಹಡಿ, ಅದೂ ಸಹ ಮೊದಲ ಮಹಡಿಯ ಮಗುವೇ. ರಸ್ತೆಯಲ್ಲಿ ಯಾರೋ ಯಮುನಮ್ಮನೋ, ಮುನಿಯಮ್ಮನೋ, ರುಕ್ಮಿಣಮ್ಮನ ಹೆಸರಿನವರೋ ಆಂಟಿಯೊಬ್ಬರು ಆ ಎದುರು ಮನೆ ಪಾಪುವಿನ ವಯಸ್ಸಿನದ್ದೇ ಹೆಣ್ಮಗುವನ್ನ ಸೊಂಟಕ್ಕೆ ಏರಿಸಿಕೊಂಡು ಹೋಗುತ್ತಿದ್ದರು ಆ ಹೆಣ್ಮಗು ಮೇಲೆ ನೋಡಿ ನಗುತ್ತಲಿತ್ತು. ಅರೆರೆ ಯಾಕೆ ನಕ್ತಿತು ಅದು ಎಂದು ಮೇಲೆ ನೋಡಿದರೆ ಆಸಾಮಿ ಪುಟ್ಟ ಚಡ್ಡಿಯನ್ನೇ ಹಾಕದೇ ಸೆನ್ಸಾರ್ ಮಂಡಳಿಯನ್ನ ಪ್ರದರ್ಶನಕ್ಕಿಟ್ಟಿದ್ದಾನೆ. ಲೋ ರಾಜ ಸುಮ್ಮನೆ ಮಾನ ಕಳೀತೀಯಪ್ಪಾ ಹೋಗಿ ಚೆಡ್ಡಿ ಹಾಕ್ಕೋ ಹೋಗೊ ಎಂದು ಒಂದು ಟೆಲಿಪತಿ ಮೆಸೇಜನ್ನು ಅವನೆಡೆಗೆ ಒಗೆದೆ. ಅವನೇನು ಕಮ್ಮಿಯೇ ದೃಷ್ಟಿಯಲ್ಲೇ ೫ಜಿ ಸ್ಪೀಡಿನಲ್ಲಿ ಒಂದು ಮೆಸೇಜನ್ನ ಕಳಿಸಿದ ಹಾಗೆ ಲುಕ್ ಕೊಟ್ಟ. ಲೋ ಗೊಗ್ಗಯ್ಯನ ಮಾದರಿಯ ಗಡ್ಡದಾರಿ ಕಾಡು ಪ್ರಾಣಿ, ಏಸಿ ಗಾಳಿ ತೊಗೊಳ್ಳೋ ಸ್ವಾತಂತ್ರ್ಯ ಇರೋದೇ ಈಗ, ಅದಕ್ಕೂ ಕಲ್ಲು ಹಾಕಬೇಡ, ಬೇಕಾದರೆ ನೀನೂ ಸ್ವಾತಂತ್ರ್ಯವನ್ನ ಅನುಭವಿಸಿ ನೋಡು ಎಂದ. ಮೆಸೇಜನ್ನ ಸುಮ್ಮನೆ ಡಿಲೀಟ್ ಮಾಡಿ ಹಾಕಿ ಆ ಪೋರ್ಟಿಕೋದ ಗ್ರಿಲ್ಸ್ ಬಳಿ ನಿಂತು ಏನು ಮಾಡುತ್ತಿರುವನೆಂದು ಸುಮ್ಮನೆ ನೋಡುತ್ತಾ ನಿಂತೆ. ಈ ಮಕ್ಕಳು ಸುಮ್ಮನೆ ನಿಂತರೂ ನೋಡಲು ಚೆನ್ನ ಬಿಡಿ. ರಾತ್ರಿ ಎಂಟು ಗಂಟೆ, ಅಮ್ಮ ಒಳಗೆ ಚಪಾತಿ ಸುಡುತ್ತಿದ್ದಳು, ನಾನು ಅಪರೂಪಕ್ಕೆ ಮನೆಯಿಂದ ಹೊರಗಡೆ ಸುಮ್ಮನೆ ನಿಂತಿದ್ದೇನೆ. ನಾನು ಸುಮ್ಮನೆ ನಿಂತದ್ದು ನಿಜ ಆದರೆ ಮಕ್ಕಳು ಸುಮ್ಮನೆ ನಿಲ್ಲುವುದು ಖಂಡಿತಾ ಸುಳ್ಳು ಬೀದಿ ದೀಪದ ಬೆಳಕು ನಮ್ಮಿಬ್ಬರ ಮೇಲೂ ಬೀಳುತ್ತಿತ್ತು. ಕಬ್ಬಿಣದ ಕಂಬಿಗೆ ಬಾಯಿ ಹಾಕಿ ಚೀಪುತ್ತಿದ್ದ ಲೇ ಲೇ ತರಲೆ ಧೂಳಿದೆ ಮಾರಾಯ ಮೊದಲೇ ಕಬ್ಬಿಣ ಬೇರೆ, ಮಳೆ ನೀರು ಬಿದ್ದೂ ಬಿದ್ದೂ ಖಂಡಿತಾ ಪೈಂಟೆಲ್ಲಾ ಹೋಗಿ ತುಕ್ಕು ಹಿಡಿದಿರುತ್ತೆ ಕಣೋ ಅಯ್ಯೋ ನಿನಗೆ ವಿಜ್ಞಾನವೆಲ್ಲಾ ಈಗಲೇ ಎಲ್ಲಿ ಗೊತ್ತಾಗಬೇಕು, ಎರಡುವರೆ ವರ್ಷವೋ ಮೂರು ವರ್ಷವೋ ಆಗಿರಬೇಕು ನಿನಗೀಗತಾನೆ. ಗೊತ್ತೇ ಇಲ್ಲದ ಮೇಲೆ ಅವನಿಗೇನೂ ಆಗಲಾರದು ಎಂದುಕೊಂಡೆ. ನನ್ನ ಯೋಚನೆಗೆ ನನಗೇ ನಗು ಬಂತು. ಆದರೆ ಹೌದು, ಗೊತ್ತೇ ಇಲ್ಲದಾಗ ಹೊರಗೆ ಆಟವಾಡಿ ಬಂದು ಕೊಳಕು ಕೈಗಳಲ್ಲೇ ತಿಂಡಿ ತಿಂದಾಗ ಏನಾದರೂ ಆದ ಇತಿಹಾಸವಂತೂ ಇರಲೇ ಇಲ್ಲ, ಈಗ ತಿಂದದ್ದು ಒಳಗೂ ಹೋಗುವುದಿಲ್ಲ ಕೈತೊಳೆಯದಿದ್ದರೆ. ಗೊತ್ತಿಲ್ಲದಿದ್ದಾಗ, ಚಂದ್ರನ ಸುತ್ತ ನಾವು ಸುತ್ತುತ್ತಿದ್ದೆವು. ಈಗ ಚಂದ್ರನೇ ನಮ್ಮ ಸುತ್ತ ಸುತ್ತುತ್ತಿದ್ದಾನೆ. ಗೊತ್ತಿಲ್ಲದಿದ್ದಾಗ, ಊಟ ಮಾಡಿದ್ದಕ್ಕೆ ದುಡ್ಡು ಕೊಡಬೇಕಿತ್ತು, ಈಗ ಕೊಟ್ಟ ಕಾಸಿಗೆ ತಕ್ಕ ಕಜ್ಜಾಯ ಸಿಗುತ್ತೆ….

ನನ್ನನ್ನು ಯೋಚನೆಗೆ ಹಚ್ಚಿ ಅವನೇನು ಮಾಡುತ್ತಿದ್ದಾನಲ್ಲಿ, ಓಹೋ ಅವನೂ ಏನಾದ್ರೂ ಯೋಚಿಸ್ತಿರಬಹುದಾ. ಊಹೂ! ಸಾಧ್ಯಾನೇ ಇಲ್ಲ, ಯೋಚಿಸ್ತಿರೋ ಹಾಗಿದ್ರೆ ಆ ಮುಗ್ಧ ನಗು ಮುಖದಲ್ಲಿ ಇರೋಕೆ ಸಾಧ್ಯಾನೇ ಇಲ್ಲ. ಆ ಕಬ್ಬಿಣದ ಕಂಬಿಗಳನ್ನ ಎಳೆದಾಡುತ್ತಾ ಆಟವಾಡುತ್ತಾ ಇನ್ನೂ ನಿಂತಿದ್ದ. ನಿನ್ನದೇ ಜೀವನ ಕಣೋ, ತುಕ್ಕು ಹಿಡಿದಿರೋ ಕಂಬಿ ಸಾಕು ಆಟವಾಡೋಕೆ, ನಮಗೆ ಚಿನ್ನದ ಹುಚ್ಚು ಹೆಚ್ಚಿ ಬೇರೆಲ್ಲಾ ಸಪ್ಪೆಯಾಗಿ ಕಾಣುತ್ತೆ ಕಣೋ ಎಂದುಕೊಂಡು ಒಂದು ನಿಟ್ಟುಸಿರು ಬಿಟ್ಟು ಅವನ ಕಡೆ ನೋಡಿದರೆ ಸುಯ್ಯನೆ ಚಿಲುಮೆ ಹರಿಯುತ್ತಿದೆ ಅದೂ ಮನೆ ಕಡೆಗೇ ತಿರುಗಿ ಉಯ್ಯುತ್ತಿದ್ದಾನೆ. ಲೇ ಲೇ ಅದರಲ್ಲೂ ಆಟ ಬೇರೆ ಊರೆಲ್ಲಾ ಒಳ್ಳೇ ಗಿಡಕ್ಕೆ ನೀರು ಬಿಡೋ ಹಾಗೆ, ಬರ್ತಾರೆ ತಾಳು ಅಮ್ಮ ಇವಾಗ ಮಾಡ್ತಾರೆ ಸರಿಯಾಗಿ ಅಂತ ನೋಡುತ್ತಾ ನಿಂತೆ. ಟ್ಯಾಂಕು ಖಾಲಿಯಾಯ್ತಂತ ಕಾಣುತ್ತೆ. ಒಂದೆರಡು ನಿಮಿಷ ಸುಮ್ಮನೆ ನಿಂತ. ಯಾಕೆ ಸುಮ್ಮನೆ ನಿಂತಿದ್ದಾನೆ ಅಂತ ಗೊತ್ತಾಗಲಿಲ್ಲ ಕುತೂಹಲ ಹೆಚ್ಚಾಯ್ತು. ತಲೆ ಬಗ್ಗಿಸಿ ನೆಲದ ಮೇಲೆ ಸುಸು ಹರಡಿರುವುದನ್ನ ನೋಡುತ್ತಿದ್ದಾನೇನೋ ಅಂದುಕೊಂಡೆ. ಇರಬಹುದೂ ಸಹ. ಇದ್ದಕ್ಕಿದ್ದಂತೆ ಅಳಲು ಶುರುಮಾಡಿದ. ಅರೆರೆ ಸುಮ್ಮನೆ ನಿಂತಿದ್ದವನು ಅಳಲು ಶುರು ಮಾಡಿಕೊಂಡ! ಯಾರೂ ಹೊಡೆದಿಲ್ಲ. ನಾನಂತೂ ಏನೇ ಮಾತನಾಡಿದ್ದರೂ ಮನಸ್ಸಿನಲ್ಲೇ ಮಾತನಾಡಿಸಿದ್ದು ಅವನನ್ನ. ಅವನ ಮನೆಯ ಒಳಗಿನಿಂದಂತೂ ಸದ್ದೇ ಬಂದಿಲ್ಲ ಹೊರಗೆ. ಮತ್ಯಾಕೆ ಅತ್ತ ಇವ ಜಾಣ ಮರಿ. ಸುಮ್ಮನೆ ನಿಂತಿದ್ದವನ ತಲೆಗೆ ಹುಳ ಬಿಡ್ತಾನಲ್ಲಾ, ಸರಿ, ಕಾದೆ. ಯಾರೋ ಛಟೀರನೆ ಹೊಡೆದಿರುವ ಹಾಗೆ ಅಲ್ಲೇ ಕುಳಿತು ಹೋ ಎಂದು ಕಿರುಚುತ್ತಿದ್ದಾನೆ. ಒಳಗಿನಿಂದ ಯಾರೂ ಬರದಿದ್ದರಿಂದಲೋ ಏನೋ ಬಾಗಿಲವರೆಗೂ ಓಡಿದ ಅಮ್ಮಾ ಎಂದು ಅತ್ತ ಮತ್ತೆ ಓಡಿ ಬಂದು ಸುಸು ಮಾಡಿದ ಜಾಗದಲ್ಲಿ ಕುಳಿತ ಅತ್ತ. ನನಗೆ ಒಂದು ಕಡೆ ನಗು. ಇದೇನು ಹುಚ್ಚಾಟನಪ್ಪಾ ಇವನದ್ದು. ಲೋ ಯಾಕೋ ಮಾರಾಯ ಅಳ್ತಿದ್ದೀಯ, ಏನಾಯ್ತೋ ನಿನಗೆ ಎಂದು ಕೇಳಬೇಕೆನಿಸಿತು ಆದರೆ ರಸ್ತೆಯಲ್ಲಿ ಓಡಾಡುವವರೋ, ಅಕ್ಕ ಪಕ್ಕದವರೋ ಏನಂದುಕೊಂಡಾರೆಂಬ ಹಿಂಜರಿಕೆ. ಹೋ ಜಂಕ್ಷನ್ ಬಾಕ್ಸಿಗೆ ಇರುವೆ ಏನಾದರೂ ಕಚ್ಚಿರಬಹುದೇ ಅಂತ ಕೂಡ ಒಮ್ಮೆ ಸುಳಿದು ಹೋಯ್ತು ಬುದ್ಧಿಯ ಬತ್ತಳಿಕೆಯಲ್ಲಿ. ಪೋರ ಇನ್ನೂ ಅಳುತ್ತಾ ಬಾಗಿಲವರೆಗೂ ಪುಟುಪುಟುಪುಟು ಓಡುವುದು ಮತ್ತೆ ತೀರ್ಥ ಸ್ಥಳಕ್ಕೆ ಮರಳುವುದು. ಅಂತೂ ಮಹಾತಾಯಿ ನಿಧಾನವಾಗಿ ನೈಟಿ ವೇಷ ಭೂಷಣದಲ್ಲಿ ಹೊರಗೆ ಬಂದರು. ವಾಮನನಂತಹ ಈ ಪ್ರಚಂಡ ಹುಯಿಲೆಬ್ಬಿಸುತ್ತಿರುವುದನ್ನು ಕೇಳಿ ಬನಿಯನ್ನಿನ ಹೊಟ್ಟೆಯೊಂದು, ಮತ್ತು ಬೆಂಡಾದ ಎರಡು ಜೀವಗಳು ಹೊರಗೆ ಬಂದು ಸುತ್ತ ನೋಡಿದವು, ಏನಾಯ್ತೋ ಪುಟ್ಟ, ಓನಮ್ಮಾ ರಾಜಾ, ಬಂಗಾರ, ಏನಾಯ್ತು ನೋಡೇ, ಇರ್ಬೆ ಕಚ್ಚೈತೇನೋ ನೋಡು… ಅದು ಇದು ಮಾತನಾಡಿಕೊಂಡರು ಸುತ್ತಾ ನೋಡಿದರು, ನಾನು ಮೊಬೈಲು ಹಿಡಿದು ಗಮನಿಸಿಯೇ ಇಲ್ಲವೆಂಬಂತೆ ನಾಟಕವಾಡುತ್ತಿದ್ದೆ.

ಅವನನ್ನ ಎತ್ತಿಕೊಂಡರು, ಒಳಹೋಗಿ ಬಾಗಿಲು ಹಾಕಿಯೇ ಬಿಟ್ಟರು! ಅಯ್ಯೋ! ರೀ ನನ್ನ ಕಥೆ ಗತಿ ಏನು, ಏನಾಯ್ತು, ಯಾಕಾಯ್ತು, ಏನು ಕಥೆ, ಇಷ್ಟು ಹೊತ್ತೂ ನಿಂತು ತಲೆ ಕೆಡಿಸಿಕೊಂಡವನು ನಾನು, ನೀವೇನಪ್ಪ ಅಂದ್ರೆ ಬಂದ್ರಿ ಹೀರೋನೇ ಹೊತ್ಕೊಂಡು ಹೊರಟೋದ್ರಿ. ಈಗ ಕಥೆ ಹೇಗೆ ಮುಕ್ತಾಯ ಮಾಡಲಿ ನಾನು. ಓದ್ತಿರೋ ಮಹಾಶಯರು ಇಲ್ಲಿವರೆಗೂ ಓದುವ ದುಸ್ಸಾಹ ಮಾಡಿದ್ರೆ ಮುಂದಿನ ನನ್ನ ಕಥೆಗೆ ಕುತ್ತು ಗ್ಯಾರಂಟಿ. ಥತ್ ತೇರೀಕಿ. ಸುಮ್ಮನೆ ವ್ಯರ್ಥವಾಯ್ತಲ್ರೀ ಎಲ್ಲಾ ಕ್ಲೈಮಾಕ್ಸೇ ಇಲ್ಲದ ಕಥೆ ಆಗೋಯ್ತಾ ಇದು? ಆದರೆ ಆ ಪಾಪು ಅತ್ತಿದ್ದು ಯಾಕೆ?

ಕೆಲವು ದಿನಗಳ ನಂತರ ಆಫೀಸಿನಿಂದ ಮನೆಗೆ ಬರುತ್ತಿದ್ದಾಗ ಸಂಜೆ, ಎದುರಿನ ಅದೇ ಮನೆಯಲ್ಲಿ ನಾಲ್ಕೈದು ಹೆಂಗಸರು ನಿಂತು ಬಾಯಿಚಪಲ ತೀರಿಸಿಕೊಳ್ಳುತ್ತಿದ್ದರು, ಈ ಪುಟ್ಟ ಅವರ ಸ್ವಲ್ಪ ಹಿಂದೆಯೇ ನಿಂತಿದ್ದ ಮತ್ತೆ ಸುಸು ಮಾಡಿಕೊಂಡ, ಅದರ ನೈಟಿ ಅಮ್ಮ ಹೇಯ್, ನಿನಗೆ ಎಷ್ಟು ಸಲ ಹೇಳಬೇಕೋ, ಸುಸು ಬಂದ್ರೆ ಅಮ್ಮ ಅಂತ ಕರೀಬೇಕು ಅಂತ ಹೇಳಿಲ್ಲಾ ಅಂತ ನಿಂತಲ್ಲಿಂದಲೇ ಗುಟುರು ಹಾಕಿದ್ರು. ಅವನು ಹೋ ಎಂದು ಅಳಲು ಶುರುಮಾಡಿದ. ಆಹಾ! ಏನ್ ಪ್ರತಿಭಾವಂತನಪ್ಪ ಇವನು, ಅಮ್ಮ ಬಯ್ಯದಿರಲೆಂದು, ಅಮ್ಮನ ಗಮನ ಸುಸುವಿನೆಡೆಗೆ ಹೋಗದಿರಲೆಂದು ಆವತ್ತು ಹಾಗೆ ಅತ್ತನೇನೋ. ಭಾರತದ ರಾಜಕೀಯ ಕ್ಷೇತ್ರಕ್ಕೆ ಒಳ್ಳೆಯ ಭವಿಷ್ಯವಂತೂ ಖಂಡಿತಾ ಇದೆ! ಏನಂತೀರಿ?









+ನೀ.ಮ. ಹೇಮಂತ್

No comments:

Post a Comment